Friday, 27 September 2019

ಭೈರಪ್ಪ : ದಸರಾ ಉದ್ಘಾಟನೆ

ನನ್ನ ಸಾಹಿತ್ಯ ಓದಿಗೆ ಹೊಸ ಚೈತನ್ಯ ತುಂಬಿದವರು ಎಸ್ ಎಲ್ ಭೈರಪ್ಪ ಅವ್ರು. ಅವರು ದಸರಾ ಉದ್ಘಾಟನೆ ಮಾಡುತ್ತಿರುವ ಈ ಸಂಧರ್ಭದಲ್ಲಿ ಖುಷಿಗೆ ಈ ಬ್ಲಾಗ್. ಅವರ ಗ್ರಹಣ, ನಾಯಿ ನೆರಳು, ಆವರಣ, ನಾನೇಕೆ ಬರೆಯುತ್ತೇನೆ ಓದಿದ್ದೇನೆ. ಗೃಹಭಂಗ ಓದುತ್ತಿದ್ದೇನೆ . ಪರ್ವ ಸ್ವಲ್ಪ ಓದಿ, ಈಗ ಸೂಕ್ತ ಸಮಯ ಅಲ್ಲ ಅಂತ ತೆಗೆದು ಇಟ್ಟು, ಗೃಹಭಂಗ ಸುರು ಮಾಡಿದ್ದೇನೆ. ಎಸ್  ಎಲ್ ಭೈರಪ್ಪ ನನ್ನ ಮೆಚ್ಚಿನ ಲೇಖಕರಲ್ಲಿ ಒಬ್ಬರು. 'ಗ್ರಹಣ' ನಾನು ಓದಿದ ಭೈರಪ್ಪ ಅವರ ಮೊದಲ ಪುಸ್ತಕ. ಅದೇ ನನ್ನನ್ನು ಭೈರಪ್ಪ ಅವರ ಅಭಿಮಾನಿಯನ್ನಾಗಿಸಿತು. ಅವರ ಪುಸ್ತಕಗಳ ಓದು ಮುಂದುವರೆಯಿತು. 'ಆವರಣ' ಓದಿದೆ(50  ಮುದ್ರಣಗಳ ಕಂಡ ಪುಸ್ತಕ), ಇನ್ನು ಜ್ಞಾನಪೀಠ ಏಕೆ ಸಿಕ್ಕಿಲ್ಲ ಇವರಿಗೆ ಅಂತ ಹಲವು ಸಲ ಅನ್ನಿಸಿದೆ. ಆದ್ರೆ ಸ್ನೇಹಿತ 'ಜಾಮೂನು' ಹೇಳಿದ್ದು ನೆನಪಾಯಿತು, "ಬಿಡಿ ಸರ್, ಜ್ಞಾನಪೀಠಕ್ಕಿಂತ ದೊಡ್ಡವರು ಅವ್ರು " ಅಂತ. ಮುಂದೆ ಹೇಳಲು ಏನೂ ಇರಲಿಲ್ಲ. ಅವರ ಪುಸ್ತಕಗಳ ಮೆಚ್ಚಿಕೊಂಡವನಿಗೆ ಅವರ ಭೇಟಿ ಆಗಬೇಕು ಅನ್ನೋ ದೊಡ್ಡ ಬಯಕೆ ಇತ್ತು. ಕಳೆದ ವರ್ಷ ಅವರ ಹುಟ್ಟೂರಾದ ಸಂತೇಶಿವರದಲ್ಲಿ 'ಗೌರಮ್ಮ (ಅವರ ತಾಯಿ) ಸ್ಮಾರಕ ಟ್ರಸ್ಟ್' ವತಿಯಿಂದ ಅವರ ಹುಟ್ಟು ಹಬ್ಬದ ದಿನ 'ಯುವ ಬರಗಾರರೊಂದಿಗೆ ಸಂವಾದ ' ಕಾರ್ಯಕ್ರಮಕ್ಕೆ ವೀಕ್ಷಕರಾಗಿ ಮೊದಲೇ ಬುಕ್ ಮಾಡ್ಕೊಂಡು ಸ್ನೇಹಿತ ಜಾಮೂನು ಅವರ ಜೊತೆ ಹೋದೆ. ಒಂದು ಸಣ್ಣ ಕುಗ್ರಾಮ ಅದು. ಅದರ ಬಗ್ಗೆ ಅದಕ್ಕಿಂತ ಹಿಂದಿನ ವರ್ಷ ಪ್ರಜಾವಾಣಿ ಸಹಯೋಗದಲ್ಲಿ 'ಭೈರಪ್ಪ ಅವರ ಜೊತೆ ನಾವು, ನೀವು' ಕಾರ್ಯಕ್ರಮದ ವಿಡಿಯೋ(ಅದರ ಲಿಂಕ್ https://www.youtube.com/watch?v=tkZqxzQcsio&t=5s ) ನೋಡಿದ್ದೇ, ಅವರ ಬಾಲ್ಯದ ಬಗ್ಗೆ , ಊರಿನ ಬಗ್ಗೆ  ತುಂಬಾ ವಿವರಣೆಗಳು ನೀಡ್ದಿದರು. ಆ ವಿಡಿಯೋದಲ್ಲಿ ತಾವು ಹುಟ್ಟಿ ಬೆಳೆದ ಜಾಗಗಳ ಬಗ್ಗೆ ಹೇಳಿದ್ದರು. ಅದರಲ್ಲಿ ಬೆಟ್ಟದ ರಂಗನಾಥ ಸ್ವಾಮಿ ಬಗ್ಗೆ , ತಮ್ಮ ಮಾವನಿಗೆ ಹಾವು ಕಚ್ಚಿ ಸಾಯಲಿ ಅಂತ ಬೇಡಿಕೊಂಡಿದ್ದ ಸ್ವಾರಸ್ಯಕರ ಸಂಗತಿ ಬಗ್ಗೆ ಸಹ ಹೇಳಿದ್ದರು. ಕುತೂಹಲ ತಡಿಯಲಾರದೆ ಜಾಮೂನು'ಗೆ ಇನ್ನು ಸಂತೇಶಿವರದ ಊರಿಗೆ ತಿರುಗಿಕೊಳುವ  ರಸ್ತೆಯಲ್ಲಿ  ಬರುವವರಿಗೆ ಸ್ವಾಗತಿಸಲು ಹಾಕಿದ್ದ ಟೆಂಟ್ ಹತ್ರ ಮಾಹಿತಿ ಕೇಳಿಕೊಂಡು ಬೆಟ್ಟದ ರಂಗನಾಥ ಸ್ವಾಮಿ ಕಡೆಗೆ ಗಾಡಿ ಹೊಡೆಯಲು ತಿಳಿಸಿದೆ. ಅವರು ಸುತ್ತಿದ ಜಾಗಗಳಲ್ಲಿ ನಮ್ಮ ಪಾದ ಸ್ಪರ್ಶ ಮಾಡಲಿ ಅನ್ನ್ನೋದೇ ನನ್ನ ಬಯಕೆ ಆಗಿತ್ತು, ಅದು ಪುಣ್ಯದ ಕೆಲಸ ಅಂತ ಅಂದುಕೊಂಡಿದ್ದೆ. ವ್ಯಕ್ತಿ ಆರಾಧನೆ ಅಂದುಕೊಂಡರೆ ತಪ್ಪಾಗಬಹುದು ,ಅಭಿಮಾನ ಅಂದ್ರೆ ಸರಿ. ಆ ಬೆಟ್ಟದ ಮೇಲಿಂದ ಕಾಣುವ ಆ ಹಸಿರು ನೋಟ , ಆಹಾ ಕಣ್ಣಿಗೆ ಪರಮಾನಂದ. ಅಲ್ಲಿಂದ ಸೀದಾ ಹೊರಟು, ಕಾರ್ಯಕ್ರಮ ನಡೆಯುವ ಅವರ ಮನೆಯ ಮುಂದೆ ಹೋಗಿ ನಿಂತೆವು. ಮೊದಲು ಎಲ್ಲರಿಗು ತಿಂಡಿ ತಿಂದು ಬರಲು ತಿಳಿಸಿದರು, ಅಲ್ಲೇ ಪಕ್ಕದ ಹೊಲದಲ್ಲಿ ಬೆಳ್ಗಿನ ಉಪಹಾರದ ವ್ಯವಸ್ಥೆ ಆಗಿತ್ತು. ಭೈರಪ್ಪ ಅವ್ರು ಅಲ್ಲೇ ಕುರ್ಚಿ ಮೇಲೆ ಕುಂತು, ಕಾಫಿ ಕುಡಿಯುತ್ತಿದ್ದರು. ನಾನು ಸ್ನೇಹಿತ ಮೊದಲು ಹೋದವರೇ ಅವರ ಕಾಲು ಮುಟ್ಟಿ  ನಮಸ್ಕಾರ ಮಾಡಿದೆವು, ದೊಡ್ಡವರ ಕಂಡಾಗ ಕಾಲು ಮುಟ್ಟಿ ನಮಸ್ಕಾರ ಮಾಡುವದು ಸಂಸ್ಕಾರ ಸಹ ಹೌದು  . ಅವರ ಕೈಗಳು ನಮ್ಮ ತಲೆ ಮೇಲೆ ಇಟ್ಟರು. ಅಲ್ಲಿಗೆ ನಮ್ಮ ತಲೆ ಧನ್ಯ. ಅಕ್ಕ ಪಕ್ಕ ಕೂತು ಫೋಟೋ ತೆಗೆಸಿಕೊಂಡೆವು. ಅವರ ಜೊತೆ ಮಾತಾಡಿಯೇ ಹೊಟ್ಟೆ ತುಂಬಿತ್ತು. ಆದ್ರೂ ಮಧ್ಯಾಹ್ನ ಊಟದ ವರೆಗೆ ದೇಹ ತಡೀಬೇಕು  ಅನ್ಕೊಂಡು , ಗಡಿಬಿಡಿಯಲ್ಲಿ ತಿಂಡಿ ತಿಂದು ಕಾರ್ಯಕ್ರಮಕ್ಕೆ ಬಂದು ಸೇರಿದೆವು. ಬಹಳ ವಿಸ್ತಾರವಾಗಿ ನಡೆಯಿತು ಕಾರ್ಯಕ್ರಮ. ನಾವು ಸಹ ಪ್ರಸ್ತುತ ವಿದ್ಯಮಾನಕ್ಕೆ ಸಂಬಂಧಿಸಿದ  ಭಾಷೆ ಹಾಗು ಇತಿಹಾಸ ತಿರುಚುವಿಕೆ ಬಗ್ಗೆ ಕೇಳಿದ್ದು, ಅವರು ಉತ್ತರ ಹೇಳಿದ್ದು ತುಂಬಾ ಖುಷಿಯಾಯಿತು. ಸಂಜೆ ಒಲ್ಲದ ಮನಸಿನಿಂದ ನಾನು  ಬೆಂಗಳೂರಿಗೆ ಹೊರಟೆ. ಹೊರಡುವ ಮುನ್ನ ಸ್ನೇಹಿತನಿಗೆ 'ನಾಯಿ ನೆರಳು ' ಪುಸ್ತಕದ ಮೇಲೆ ಅವರ ಆಟೋಗ್ರಾಫ್ ತಗೊಳ್ಳಲು ಹೇಳಿ ಬಂದೆ. ರಾತ್ರಿ 8  ಗಂಟೆ ತನಕ ಅವರ ಮನೆ ಮುಂದೆ ಕಾಯ್ದು, ಬಿಡದೆ ಅವರ ಆಟೋಗ್ರಾಫ್ ಹಾಕಿಸಿಕೊಂಡಿದ್ದು ನನ್ನ ಸ್ನೇಹಿತನ ಬಹುದೊಡ್ಡ ಸಾಧನೆ.ಅವರು ಹೆಗಲ ಮೇಲೆ ಕೈಯಿಟ್ಟಿದ್ದ ಅಂಗಿ  ಇನ್ನು ಒಗೆದಿಲ್ಲ ಅಂತ ಇತ್ತೀಚಿಗೆ ಸಿಕ್ಕಿದ್ದ ಸ್ನೇಹಿತ ಹೇಳಿದ್ದು ಕೇಳಿದರೆ ಖುಷಿ ಆಯಿತು. ಅವರ ಬಗ್ಗೆ ಇರುವ ಗೌರವಕ್ಕೆ ಬೇರೆ ಉದಾಹರಣೆ ಬೇಕಿಲ್ಲ. ಅವರ ಪುಸ್ತಕದ ಬಗ್ಗೆ ವಿಮರ್ಶೆ ಬರೆಯೋ ಯೋಗ್ಯತೆ ನನಗಿಲ್ಲ. ನನಗೆ ಇಷ್ಟ ಅಷ್ಟೇ. ಎಲ್ಲೇ ಅವರ ಪುಸ್ತಕ ನೋಡಿದ್ರು ತಗೋಬೇಕು ಅನ್ಸುತ್ತೆ. ಓದದೇ ಇರುವ ಅವರ ಪುಸ್ತಕಗಳು ಇನ್ನು ಸುಮಾರು ಹಾಗೆ ಇವೆ ನನ್ನ ಸಣ್ಣ ಬುಕ್ ರ್ಯಾಕ್  ಅಲ್ಲಿ. ಯಾರಿಗೋ ಪುಸ್ತಕ ಉಡುಗೊರೆ ಕೊಡಬೇಕು ಅನ್ಸಿದ್ರು ಮೊದಲು ನೆನಪಾಗೋದು ಭೈರಪ್ಪ ಅವರ ಪುಸ್ತಕಗಳು. ನಿನ್ನೆಯಷ್ಟೇ ಪ್ರಾಣೇಶ್ ಅವರ ಹಾಸ್ಯ ಕಾರ್ಯಕ್ರಮ ನೋಡ್ತಿದ್ದೆ, ಅದರಲ್ಲಿ ಹಲವು ಸಲ ಭೈರಪ್ಪ ಅವರ ಹೆಸರು ಹೇಳಿ, ಮಕ್ಕಳಿಗೆ ಅಂಥವರ ಪುಸ್ತಕ ಓದೋಕೆ ಕೊಡಿ, ಸಾಹಿತ್ಯ ಓದುವ ಹವ್ಯಾಸ ಬೆಳೆಸಿ ಅಂತ ಹಲವು ಸಲ ಹೇಳಿದರು. ಸಾಹಿತ್ಯ ಓದುವದರಿಂದ ಮನುಷ್ಯನಲ್ಲಿ  ಗಮನಾರ್ಹ ಬದಲಾವಣೆಗಳು ಸಾಧ್ಯ. ಒಳ್ಳೆಯದರ ಕಡೆಗೆ ಅವು ನಮ್ಮನೆಲ್ಲ ತೆಗೆದುಕೊಂಡು ಹೋಗುತ್ತವೆ ಅಂತ ನನ್ನ ನಂಬಿಕೆ ಸಹ. ನನ್ನ ಸಾಹಿತ್ಯ ಓದು ಪ್ರಾಥಮಿಕ ಶಾಲೆಯಿಂದ ನನ್ನ ಶಿಕ್ಷಕರ ಸಹಕಾರದಿಂದ ಸುರು ಆಗಿದ್ದು, ಈಗ ಸಂಪೂರಣವಾಗಿ ತೊಡಗಿಸಿಕೊಳ್ಳುವಂತೆ ಮಾಡಿದೆ. ಟ್ವಿಟ್ಟರ್ ನಿಂದಾಗಿ, ಸಮಾನಮನಸ್ಕ ಸಾಹಿತ್ಯ ಅಭಿರುಚಿಯುಳ್ಳ ಸ್ನೇಹಿತರು ಸಿಕ್ಕಿರುವದು ಸಹ ನನ್ನ ಪುಣ್ಯವೇ. ಎಲ್ಲರೂ ಪುಸ್ತಕದ ಬೆಗ್ಗೆ ಚರ್ಚೆ ಮಾಡೋದು, ಒಳ್ಳೆ ಪುಸ್ತಗಳ ಬಗ್ಗೆ ಮಾಹಿತಿ ಹಂಚಿಕೊಳ್ಳೋದು ಜೊತೆಗೆ ಪುಸ್ತಕಗಳ ಶೇರ್ ಮಾಡಿಕೊಳ್ಳೋದು. ಸಾಹಿತ್ಯದ ಕಡೆಗಿನ ಒಲವು ನಮ್ಮನ್ನು ಒಳ್ಳೆ ದಾರಿಗೆ ಎಳೆಯುತ್ತದೆ ಅನ್ನೋದರಲ್ಲಿ ಎರಡು  ಮಾತಿಲ್ಲ. ಇಷ್ಟದ ಲೇಖಕರು ಯಾರೇ ಆಗಿರಲಿ, ಒಳ್ಳೆ ಅಂಶಗಳು ಎಲ್ಲರ ಜೀವನಕ್ಕೆ ಅವಶ್ಯಕ. ಪುಸ್ತಕ ಓದುವದರಿಂದ ಸಿಗುವ ಒಳ್ಳೆ ಅಂಶಗಳು ಬೇರೆ ಮಾಧ್ಯಮದ ಮೂಲಕ ಸಿಗಲ್ಲ ಅನ್ನೋದು ನನ್ನ ಅಚಲ ನಂಬಿಕೆ ಸಹ ಆಗಿದೆ. ಏನೇ ಇರಲಿ, ಓದು ಮುಂದುವರೆಯಲಿ. ಒಳ್ಳೆ ಸಾಹಿತ್ಯ ಉಳಿಯಲಿ ಬೆಳೆಯಲಿ.  ಎಲ್ಲರಿಗು ಶುಭವಾಗಲಿ.

No comments:

Post a Comment

ಮಂಕುತಿಮ್ಮನ ಕಗ್ಗ..

ಕಳೆದ ಒಂದು ವರ್ಷದಿಂದ ಮನಸಿಗೆ ಖುಷಿ ಕೊಡುವ ಎಲ್ಲಾ ಕೆಲಸಗಳು ಮಾಡಲಿಕ್ಕೆ ಸಮಯ ಸಿಗ್ತಾ ಇದೆ. ಸಮಯ ಹೊಂದಿಸಿಕೊಳ್ಳುತ್ತಿದ್ದೇನೆ ಅಂದರೂ ಸರಿಯೇ. ಮುಖ್ಯವಾಗಿ ನಾನು ಕನ್ನಡ ...